SAʴý

ನೇಪಾಳ ಪ್ರವಾಹ: ಸಾವಿರಾರು ಜನರು ಅಸ್ತವ್ಯಸ್ತ, ಜಾಗತಿಕ ನೆರವಿಗೆ ಕಥೋಲಿಕ ಧರ್ಮಸಭೆ ಮನವಿ

ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ನೇಪಾಳ ಅಕ್ಷರಶಃ ಮುಳುಗಿ ಹೋಗಿದೆ. ಮಳೆಯ ಪ್ರವಾಹಕ್ಕೆ ಸಾವಿರಾರು ಜನರ ಜೀವನ ಅಸ್ತವ್ಯಸ್ತವಾಗಿದ್ದು, ಅಪಾರ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. ಈ ಸಂದರ್ಭದಲ್ಲಿ ಇಲ್ಲಿನ ಕಥೋಲಿಕ ಧರ್ಮಸಭೆಯು ಜನತೆಯ ನೆರವಿಗಾಗಿ ಜಗತ್ತು ಮುಂದೆಬರಬೇಕು ಎಂಬ ಮನವಿ ಮಾಡಿದೆ.

ವರದಿ: ಲಿಕಾಸ್ ನ್ಯೂಸ್

ಕಳೆದ ಮೂರು ದಿನಗಳಿಂದ ಸುರಿದ ಭಾರೀ ಮಳೆಗೆ ನೇಪಾಳ ಅಕ್ಷರಶಃ ಮುಳುಗಿ ಹೋಗಿದೆ. ಮಳೆಯ ಪ್ರವಾಹಕ್ಕೆ ಸಾವಿರಾರು ಜನರ ಜೀವನ ಅಸ್ತವ್ಯಸ್ತವಾಗಿದ್ದು, ಅಪಾರ ಆಸ್ತಿ-ಪಾಸ್ತಿಗೆ ಹಾನಿಯುಂಟಾಗಿದೆ. ಈ ಸಂದರ್ಭದಲ್ಲಿ ಇಲ್ಲಿನ ಕಥೋಲಿಕ ಧರ್ಮಸಭೆಯು ಜನತೆಯ ನೆರವಿಗಾಗಿ ಜಗತ್ತು ಮುಂದೆಬರಬೇಕು ಎಂಬ ಮನವಿ ಮಾಡಿದೆ. ಈ ಪ್ರವಾಹವು ಇತ್ತೀಚಿನ ದಶಕಗಳಲ್ಲಿ ನೇಪಾಳ ಕಂಡ ಅತ್ಯಂತ ದೊಡ್ಡ ಪ್ರಾಕೃತಿಕ ವಿಕೋಪವಾಗಿದೆ.

"ಇಲ್ಲಿ ಮೂರು ದಿನದಿಂದ ಮಳೆ ಹಾಗೂ ಪ್ರವಾಹ ಉಂಟಾಗುತ್ತಿದೆ. ಅನೇಕ ಸಣ್ಣ ಪುಟ್ಟ ನದಿ ಹಾಗೂ ತೊರೆಗಳು ಮಳೆಯಿಂದ ತುಂಬಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಪ್ರವಾಹವು ನೇಪಾಳ ಇತ್ತೀಚೆಗೆ ನೋಡಿದ ದೊಡ್ಡ ಪ್ರಾಕೃತಿಕ ವಿಕೋಪವಾಗಿದೆ" ಎಂದು ನೇಪಾಳದ ಪ್ರೋ-ವಿಕಾಸ್ ಅಪೊಸ್ಟಾಲಿಕ್ ಆಗಿರುವ ಫಾದರ್ ಸಿಲಾಸ್ ಬೊಗಾಟಿ ಅವರು ಹೇಳಿದ್ದಾರೆ.

ಸೆಪ್ಟೆಂಬರ್ 27 ಹಾಗೂ 28 ರಂದು ಉಂಟಾದ ಈ ಪ್ರವಾಹವು ಈವರೆಗೂ ಸುಮಾರು 217 ಜನರನ್ನು ಬಲಿ ತೆಗೆದುಕೊಂಡಿದ್ದು, ಇದರಲ್ಲಿ 35 ಮಕ್ಕಳಿದ್ದಾರೆ ಎಂದು ತಿಳಿದು ಬಂದಿದೆ. ಇದರ ಹೊರತಾಗಿ ಅನೇಕರಿಗೆ ಗಾಯಗಳಾಗಿದ್ದು, ಹಲವರು ಕಾಣೆಯಾಗಿದ್ದಾರೆ ಎಂದು ಇಲ್ಲಿನ ಸರ್ಕಾರವು ಪ್ರಕಟಿಸಿದೆ. "ಖಟ್ಮಂಡು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಪರಿಸ್ಥಿತಿ ವಿಷಮವಾಗಿದೆ" ಎಂದು ಫಾದರ್ ಬೊಗಾಟಿ ಅವರು ಹೇಳಿದ್ದಾರೆ.

ಇಲ್ಲಿನ ಸುಮಾರು 13 ದೊಡ್ಡ ಆಸ್ಪತ್ರೆಗಳಿಗೆ ಹಾನಿಯುಂಟಾಗಿದ್ದು, ಅನೇಕ ಪ್ರದೇಶಗಳಿಗೆ ಸಂಪರ್ಕ ತಪ್ಪಿಹೋಗಿದೆ. ಇದರಿಂದ ಆಹಾರ-ನೀರು ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಜನರಿಗೆ ಸರಬರಾಜು ಮಾಡಲು ಅವಕಾಶವಿಲ್ಲದಂತಾಗಿದೆ. ಇಲ್ಲಿನ ಜನತೆಗೆ ಸಹಾಯ ಮಾಡುವ ನಿಟ್ಟಿನಲ್ಲಿ ಕಾರಿತಾಸ್ ನೇಪಾಳ್ ಸಂಸ್ಥೆಯು ಈಗಾಗಲೇ ಪರಿಶೀಲನಾ ಕಾರ್ಯವನ್ನು ಆರಂಭಿಸಿದ್ದು, ಶೀಘ್ರದಲ್ಲಿ ಜನತೆಗೆ ನೆರವಾಗಲಿದೆ. ಇದರ ಜೊತೆಗೆ ಇನ್ನಿತರ ಸಂಸ್ಥೆಗಳೂ ಸಹ ಈಗಾಗಲೇ ನೆರವನ್ನು ನೀಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಫಾದರ್ ಬೊಗಾಟಿ ಹೇಳಿದ್ದಾರೆ.  

03 October 2024, 16:59